ಬ್ರೂಕ್ಸ್, ವಾನ್‍ವಿಕ್
1886-1963. ಅಮೆರಿಕದ ವಿಮರ್ಶಕ, ಪ್ರಬಂಧಕಾರ, ಅನುವಾದಕ. ಅಲ್ಲಿಯ ಸಾಹಿತಿಗಳ ವಿಮರ್ಶಾತ್ಮಕ ಜೀವನ ಚರಿತ್ರೆಗಳನ್ನೂ ವಿಮರ್ಶೆಗಳನ್ನೂ ಬರೆದಿದ್ದಾನೆ. ಪ್ಯೂರಿಟನ್ ಸಂಪ್ರದಾಯ ಅಮೆರಿಕ ಸಂಸ್ಕøತಿಯನ್ನು ತುಳಿದು ಭೋಗಜೀವನಕ್ಕೆ ಅತಿ ಪ್ರಾಧಾನ್ಯ ಕೊಟ್ಟಿತೆಂಬ ವಿಚಾರವನ್ನು ದಿ ವೈನ್ ಆಫ್ ದಿ ಪ್ಯೂರಿಟನ್ಸ್ (1909), ಅಮೆರಿಕಾಸ್ ಕಮಿಂಗ್-ಅಫ್-ಏಜ್ (1915), ದಿ ಅರ್ಡಿಯಲ್ ಆಫ್ ಮಾರ್ಕ್‍ಟ್ವೈನ್ (1920) ಮುಂತಾದ ಗ್ರಂಥಗಳಲ್ಲಿ ಪ್ರತಿಪಾದಿಸಿದ್ದಾನೆ. ಮೇಕರ್ಸ್ ಆಂಡ್ ಫೈಂಡರ್ಸ್ ಎಂಬ ಶೀರ್ಷಿಕೆಯಲ್ಲಿ ಬರೆದ ದಿ ಫ್ಲವರಿಂಗ್ ಆಫ್ ನ್ಯೂ ಇಂಗ್ಲೆಂಡ್ (1936, ಪುಲಿಟ್ಸರ್ ಬಹುಮಾನ) ಮೊದಲಾದ ಐದು ಗ್ರಂಥಗಳಲ್ಲಿ ಅಮೆರಿಕ ಸಾಹಿತ್ಯದ ಐತಿಹಾಸಿಕ ವಿವೇಚನೆಯನ್ನು ಮಾಡಿದ್ದಾನೆ. ದಿ ಪಿಲಿಗ್ರಿಮೇಜ್ ಆಫ್ ಹೆನ್ರಿ ಜೇಮ್ಸ್ (1925) ದಿ ಲೈಫ್ ಆಫ್ ಎಮರ್ಸನ್ (1932) ಇವು ಇವನ ಇತರ ಕೃತಿಗಳು. ಆಧುನಿಕ ಫ್ರೆಂಚ್ ಸಾಹಿತ್ಯದಿಂದ ಇಂಗ್ಲೀಷ್‍ಗೆ ಅನೇಕ ಕೃತಿಗಳನ್ನು ಅನುವಾದಿಸಿದ್ದಾನೆ. ದಿ ಫ್ರೀಮನ್ ಎಂಬ ಪತ್ರಿಕೆಗೆ ಈತ ಸಂಪಾದಕನಾಗಿದ್ದ (1920-24).           (ಎನ್.ಎಸ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ